ಚಿಲಿಯನ್‍ವಾಲಾ ಕದನ -
ಎರಡನೆಯ ಸಿಖ್ ಯುದ್ದದ ಕಾಲದಲ್ಲಿ ಸಿಖ್ ಹಾಗೂ ಬ್ರಿಟಿಷ್ ಸೈನ್ಯಗಳ ನಡುವೆ 1849ರ ಜನವರಿ 13ರಂದು ಚಿಲಿಯನ್ ವಾಲಾ ಬಳಿ ನಡೆದ ಕದನ. ಪಂಜಾಬಿನಲ್ಲಿ ದೊರೆ ರಣಜಿತ್‍ಸಿಂಗನ (1780-1839) ಮರಣಾನಂತರ ಅಧಿಕಾರಕ್ಕಾಗಿ ಕಿತ್ತಾಟ ನಡೆದು ಕೊನೆಗೆ ಸೈನ್ಯಾಡಳಿತ ಅಸ್ತಿತ್ವಕ್ಕೆ ಬಂತು. ರಣಜಿತ್‍ಸಿಂಗನ ಕಿರಿಯ ಮಗನಾದ ಆರು ವರ್ಷ ವಯಸ್ಸಿನ ದಲೀಪ್‍ಸಿಂಗ್ ಹೊಸ ರಾಜನೆಂದು ಘೋಷಿತನಾದರೂ ಆಡಳಿತ ಸೂತ್ರಗಳೆಲ್ಲ ಖಾಲ್ಸಾಸೈನ್ಯದ ಕೈಯಲ್ಲಿದ್ದುವು. 1845ರ ಹೊತ್ತಿಗೆ ಲಾಹೋರಿನಲ್ಲಿ ಸೈನ್ಯಬಲ ಇಮ್ಮಡಿಗೊಂಡಿತು. ರಾಜಾ ಲಾಲ್‍ಸಿಂಗ್ ವಜೀರನಾಗಿಯೂ ಸರ್ದಾರ್ ತೇಜ್‍ಸಿಂಗ್ ಸೆನಾನಿಯಾಗಿಯೂ ನೇಮಕಗೊಂಡರು. ಸಿಕ್ಖರ ಬಗ್ಗೆ ಬ್ರಿಟಿಷರ ಸಂಶಯ ಬೆಳೆಯಿತು. ಅವರು ಗಡಿ ಪ್ರದೇಶಗಳಲ್ಲಿ ತಮ್ಮ ಸೈನ್ಯಬಲವನ್ನು ಹೆಚ್ಚಿಸಿದರು. ಈ ಬೆಳವಣಿಗೆಯನ್ನು ಸಿಕ್ಖರು ಸಹಿಸಲಿಲ್ಲ. ಮೊದಮೊದಲು ಕೇವಲ ಸ್ಮರಣೆಗಾಗಿ ಯುದ್ಧವೆಂಬುದಾಗಿ ಬ್ರಿಟಿಷ್ ಹಾಗೂ ಸಿಖ್ ಸೈನಿಕರು ಭಾವಿಸಿದ್ದರು. 1845-46ರಲ್ಲಿ ನಡೆದ ಯುದ್ದಗಳಲ್ಲಿ ಸಿಖ್ ಸೈನಿಕರಿಗೆ ಸೋಲುಂಟಾಯಿತು. ಲಾಹೋರ್ ಬ್ರಿಟಿಷರ ಅಧೀನಕ್ಕೊಳಪಟ್ಟಿತ್ತು. ಜಲಂದರ್ ದೋಆಬ್ ಪ್ರದೇಶ ಬ್ರಿಟಿಷರಿಗೆ ಸೇರಬೇಕೆಂದೂ 15 ಲಕ್ಷ ಸ್ಟರ್ಲಿಂಗುಗಳನ್ನು ಯುದ್ಧದ ಖರ್ಚಿಗಾಗಿ ಸಿಕ್ಖರು ಕೊಡಬೇಕೆಂದೂ ಒಪ್ಪಂದವಾಯಿತು. ಸಿಖ್ ದರ್ಬಾರು ಹಣ ಕೊಡುವ ಸ್ಥಿತಿಯಲ್ಲಿರಲಿಲ್ಲವಾದ್ದರಿಂದ ಕಾಶ್ಮೀರ ಪ್ರಾಂತ್ಯವನ್ನೂ ಕಳೆದುಕೊಳ್ಳಬೇಕಾಯಿತು. ದಲೀಪ್ ಸಿಂಗ್ ಬ್ರಿಟಿಷರ ರಕ್ಷಣೆಯಲ್ಲಿ ಇರಬೇಕಾಯಿತು. ಬ್ರಿಟಿಷ್ ರೆಸಿಡೆಂಟ್ ಹೆನ್ರಿ ಲಾರೆನ್ಸನ ಸಹಾಯಕ್ಕಾಗಿ ಲಾಹೋರಿನಲ್ಲಿ ಬ್ರಿಟಿಷ್ ಸೈನ್ಯವನ್ನಿಡಲಾಯಿತು. ಇದೆ ಸಮಯದಲ್ಲಿ ಮುಲ್ತಾನಿನಲ್ಲಿ ರಾಜ್ಯಪಾಲನಾಗಿದ್ದ ಮುಲ್‍ರಾಜನಿಗೂ ಸಿಖ್ ಸರ್ಕಾರಕ್ಕೂ ಮನಸ್ತಾಪ ಉಂಟಾಯಿತು. ಅವನ ಸ್ಥಾನದಲ್ಲಿ ಅಧಿಕಾರ ವಹಿಸಿಕೊಳ್ಳಲು ಸರ್ದಾರ್ ಖಾನ್ ಎಂಬುವನನ್ನು ಲಾಹೋರಿನ ದರ್ಬಾರು ನೇಮಕ ಮಾಡಿತು. ಅವನು ಮುಲ್ತಾನಿಗೆ ಹೋಗುತ್ತಿದ್ದಾಗ ಅವನ ಜೊತೆಯಲ್ಲಿದ್ದ ಇಬ್ಬರು ಬ್ರಿಟಿಷ್ ಅಧಿಕಾರಿಗಳು ಹತರಾದರು. ಬ್ರಿಟಿಷರ ವಿರುದ್ಧ ಮುಲ್ತಾನಿನಲ್ಲಿ ಆರಂಭವಾದ ಪ್ರತಿಭಟನೆ ವ್ಯಾಪಕ ಸಿಖ್ ಬಂಡಾಯವಾಗಿ ಪರಿಣಮಿಸಿತು. ದಲೀಪ್ ಸಿಂಗನ ತಾಯಿ ರಾಣಿ ಝಿಂದಾನಳ ಕಲಾಪಗಳೂ ಬ್ರಿಟಿಷರ ಕೋಪಕ್ಕೆ ಕಾರಣವಾದುವು. ಎರಡನೆಯ ಸಿಖ್-ಬ್ರಿಟಿಷ್ ಯುದ್ಧ ಆರಂಭವಾಯಿತು.

	1849ರ ಜನವರಿ 13ರ ಮಧ್ಯಾಹ್ನ ನಂತರ ಲಾರ್ಡ್ ಗಾಫನ ನೇತೃತ್ವದಲ್ಲಿ ಚಿಲಿಯನ್‍ವಾಲಾ ಗ್ರಾಮದಿಂದ ಮುಂದುವರಿದು ಬರುತ್ತಿದ್ದ ಬ್ರಿಟಿಷ್ ಸೈನ್ಯವನ್ನು ಕಂಡ ಸಿಖ್ ಸೈನಿಕರು ಗುಂಡು ಹಾರಿಸುತ್ತ ಸುಮಾರು ಒಂದು ಗಂಟೆ ಕಾಲ ಅವರನ್ನು ಎದುರಿಸಿದರು. ಷೇರ್ ಸಿಂಗ ಸಿಖ್ ಸೈನ್ಯದ ನೆತೃತ್ವ ವಹಿಸಿದ್ದ. ಹೆಚ್ಚು ಸಂಖ್ಯೆಯಲ್ಲಿದ್ದ ಬ್ರಿಟಿಷ್ ಸೈನಿಕರನ್ನು ಎದುರಿಸುವುದಕ್ಕಾಗಿ ಸಿಕ್ಖರು ಅರಣ್ಯಪ್ರದೆಶದಲ್ಲಿ ಚದುರಿಕೊಂಡರು. ರಾತ್ರಿಯವರೆಗೂ ನಡೆದ ಕದನದಲ್ಲಿ ಸಿಖ್ ಸೈನಿಕರು ಬಹು ಶೌರ್ಯದಿಂದ ಹೋರಾಡಿದರು. 132 ಅಧಿಕಾರಿಗಳೂ ಸೆರಿದಂತೆ 2,446 ಬ್ರಿಟಿಷ್ ಸೈನಿಕರು ಗಾಯಗೊಂಡರು, ಇಲ್ಲವೆ ಮರಣ ಹೊಂದಿದರು. ನಾಲ್ಕು ಬಂದೂಕುಗಳು ಮತ್ತು ಮೂರು ಠಾಣ್ಯಗಳು ಸಿಕ್ಖರ. ಕೈವಶವಾದವು ಸಿಕ್ಖರಿಗೂ ಈ ಕದನದಲ್ಲಿ ತುಂಬ ನಷ್ಟ ಉಂಟಾಗಿತ್ತು. ಮಾರನೆಯ ಬೆಳಿಗ್ಗೆ ಸಿಕ್ಖರು ತಮ್ಮ ವಿಜಯಕ್ಕಾಗಿ ಇಪ್ಪತ್ತೊಂದು ಕುಶಾಲು ತೋಪುಗಳನ್ನು ಹಾರಿಸಿದರು. ಬ್ರಿಟಿಷರು ತಮಗೇ ವಿಜಯವಾಯಿತೆಂದು ಹೇಳಿ ಕೊಂಡರೂ ನಿಜಸಂಗತಿ ಬೇರೆಯಾಗಿತ್ತು. ಬ್ರಿಟನ್ನಿನಲ್ಲಿ ಲಾರ್ಡ್ ಗಾಫನ ವರ್ತನೆ ಹಾಗೂ ಬ್ರಿಟಿಷ್ ಸೈನ್ಯದ ತೀವ್ರ ನಷ್ಟಕ್ಕಾಗಿ ತುಂಬ ಅಸಮಾಧಾನವುಂಟಾಗಿತ್ತು. ಚಿಲಿಯನ್‍ವಾಲಾ ಕದನ ಬ್ರಿಟಿಷರಿಗೆ ಮರೆಯಲಾಗದ ಕಹಿ ಅನುಭವವಾಗಿತ್ತು.					(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ